ಮೈಸೂರು ದಸರಾ ವಿಶೇಷ; ದಸರಾ ‘ಪೊಲೀಸ್ ಬ್ಯಾಂಡ್’ಗೆ ಹೊಸ ರೂಪ

ಮೈಸೂರು, ಅಕ್ಟೋಬರ್ 01;ಮಹೋತ್ಸವ ಎಂದರೆ ಅಲ್ಲಿ ನೂರು ಅಚ್ಚರಿಗಳ ಸೊಬಗು ಅಡಗಿ ಕುಳಿತಿರುತ್ತದೆ. ಜಂಬೂಸವಾರಿ ಒಂದು ಆಕರ್ಷಣೆಯಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ಮತ್ತೊಂದು ಕಡೆ. ಈ ವರ್ಷ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಪೊಲೀಸ್ ಬ್ಯಾಂಡ್’ ಹೊಸ ರೂಪ ಪಡೆಯಲಿದೆ.

ಅಂದರೆ ಪೊಲೀಸ್ ಬ್ಯಾಂಡ್ ತಂಡಕ್ಕೆ 15 ವರ್ಷಗಳ ಬಳಿಕ ಹೊಸ ಸಂಗೀತಗಾರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಹಿರಿಯ ಪೊಲೀಸ್ ಅಧಿಕಾರಿಗಳು ಅಂದುಕೊಂಡಂತೆ ನಡೆದರೆ ಈ ಬಾರಿಯ ಸರಳ ದಸರೆಯಲ್ಲಿಯೇ ಹೊಸ ಪೊಲೀಸ್ ಬ್ಯಾಂಡ್ ರಾಗಕ್ಕೆ ಮನಸೋಲಬಹುದು.

ಪೊಲೀಸರೆಂದರೆ ಸಿಡುಕುವ, ಬಯ್ಯುವ, ಬಡಿಯುವ ಖಾಕಿ ಪಡೆ ಮಾತ್ರವಲ್ಲ. ಅವರಲ್ಲಿಯೂ ಸಂಗೀತಗಾರರು, ಕಲಾವಿದರಿದ್ದಾರೆ ಎನ್ನುವುದನ್ನು ಈ ಪೊಲೀಸ್ ಬ್ಯಾಂಡ್ ತಂಡ ನಿರೂಪಿಸುತ್ತದೆ. ಹೋದಕಡೆಯೆಲ್ಲ ಪೊಲೀಸ್ ಹಾಗೂ ಸಾರ್ವಜನಿಕರ ನಡುವಿನ ಸ್ನೆಹದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

ನಾಡ ಹಬ್ಬ ದಸರೆಯಲ್ಲಿ ಜಂಬೂ ಸವಾರಿ ಜತೆ ಪೊಲೀಸ್ ಬ್ಯಾಂಡ್ ತಂಡದ ಸಂಗೀತವೂ ಗಮನ ಸೆಳೆಯುತ್ತದೆ. ಈ ತಂಡಕ್ಕೆ ಸುಮಾರು 152 ವರ್ಷಗಳ ಇತಿಹಾಸವಿದ್ದು, ರಾಜರ ಕಾಲದಿಂದ ಆರಂಭವಾದ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಅಂದು ಪ್ಯಾಲೇಸ್ ಬ್ಯಾಂಡ್ ಆಗಿದ್ದ ತಂಡ ಇಂದು ಪೊಲೀಸ್ ಇಲಾಖೆಯ ಹೆಮ್ಮೆಯ ಭಾಗವಾಗಿ ಪರಿವರ್ತನೆಯಾಗಿದೆ.


ಏನಿದು ಪೊಲೀಸ್ ಬ್ಯಾಂಡ್?;

                    ಮೈಸೂರು ಪೊಲೀಸ್ ಬ್ಯಾಂಡ್‌ಗೆ ಸುದೀರ್ಘ ಕಾಲದ ಇತಿಹಾಸವಿದೆ. ಜೊತೆಗೆ ಮೈಸೂರು ಮಹಾರಾಜರ ಕೊಡುಗೆ ಕೂಡ ಇದೆ. 1868 ರಲ್ಲಿ ಮಹಾರಾಜ ಹತ್ತನೇ ಚಾಮರಾಜ ಒಡೆಯರ್ ಕಾಲದಲ್ಲಿ ‘ಅರಮನೆ ಸಂಗೀತ ತಂಡ’ ಆರಂಭವಾಯಿತು. ಆಗ ಎಲ್ಲರೂ ಇದನ್ನು ‘ಇಂಗ್ಲಿಷ್ ಬ್ಯಾಂಡ್’ ಎಂದೇ ಸಂಬೋಧಿಸುತ್ತಿದ್ದರು. ಅರಮನೆಗೆ ಯಾರಾದರೂ ಮಹನೀಯರು ಅಥವಾ ಗಣ್ಯರು ಬಂದರೆ ಅವರಿಗೆ ಸ್ವಾಗತ ನೀಡಲು ಈ ತಂಡ ಸಂಗೀತ ಸುಧೆ ಹರಿಸುತ್ತಿತ್ತು. ಬಳಿಕ ಕರ್ನಾಟಿಕ್ ಸಂಗೀತದ ಸ್ಪರ್ಶವನ್ನೂ ಈ ತಂಡಕ್ಕೆ ನೀಡಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ತಂಡವನ್ನು ಇನ್ನಷ್ಟು ಆಧುನೀಕರಣಗೊಳಿಸಿ ಪ್ಯಾಲೇಸ್ ಬ್ಯಾಂಡ್ ಎಂದು ಕರೆಯಲಾಯಿತು. 1951ರಲ್ಲಿ ‘ಅರಮನೆ ಬ್ಯಾಂಡ್’ ಪೊಲೀಸ್ ಇಲಾಖೆಯಲ್ಲಿ ವಿಲೀನವಾಗಿ ‘ಪೊಲೀಸ್ ಬ್ಯಾಂಡ್’ ಎಂದು ಹೆಸರು ಪಡೆಯಿತು. 1981ರಲ್ಲಿ ಡಾ. ಜಿ. ವಿ. ರಾವ್ ಅವರು ಡಿಜಿಪಿಯಾಗಿದ್ದ ಸಂದರ್ಭ ಎಲ್ಲಾ ಜಿಲ್ಲೆಗಳ ಪೊಲೀಸ್ ಬ್ಯಾಂಡ್ ತಂಡದ ಸುಮಾರು 500 ಕಲಾವಿದರು ದಸರೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಕಾರ್ಯಕ್ರಮ ನೀಡುವ ಸಂಪ್ರದಾಯ ಆರಂಭಿಸಿದರು.

ನೇಮಕ ಯಾವಾಗ  ?     

 ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಕೋರಿಕೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಕ್ತವಾಗಿ ಸ್ಪಂದಿಸಿ ಸರಕಾರಕ್ಕೆ ಶಿಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 17 ಮಂದಿ ನುರಿತ ಸಂಗೀತಗಾರರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದೆ. ಈಗಾಗಲೇ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಲಿಖಿತ ಪರೀಕ್ಷೆ ಹಾಗೂ ಇತರ ವಿಭಾಗಳಲ್ಲಿ ಆಯ್ಕೆ ಮುಗಿದಿದೆ. ಪ್ರಾಯೋಗಿಕ ಪರೀಕ್ಷೆ ನಡೆಯಬೇಕಿದೆ.

ಬ್ಯಾಂಡ್ ಹೌಸ್‌ನ ಹಿರಿಮೆ:

ಬ್ಯಾಂಡ್ ತಂಡಕ್ಕೆ ನಗರದಲ್ಲಿ ಪ್ರತ್ಯೇಕ ಬ್ಯಾಂಡ್ ಹೌಸ್ ಇತ್ತು. ಮಿರ್ಜಾ ರಸ್ತೆಯಲ್ಲಿ ಬ್ಯಾಂಡ್ ಹೌಸ್ ನಿರ್ಮಿಸಲಾಗಿತ್ತು. ಇದರಲ್ಲಿ ಸಂಗೀತ ಉಪಕರಣ ಕೊಠಡಿ, ಮ್ಯೂಸಿಕ್ ಲೈಬ್ರೆರಿ, ತಾಲೀಮು ಕೊಠಡಿ ಸೇರಿದಂತೆ ಸಂಗೀತಾಭ್ಯಾಸ ಹಾಗೂ ಪ್ರದರ್ಶನಕ್ಕೆ ಇಲ್ಲಿ ಎಲ್ಲಾ ಅವಕಾಶ ಇತ್ತು. ಬಳಿಕ ನಗರ ಪೊಲೀಸ್ ಆಯುಕ್ತರ ಕಚೇರಿಯಾಗಿ ಬಳಕೆಯಾಯಿತು. ಇಂಗ್ಲಿಷ್ ಬ್ಯಾಂಡ್ 50 ಮಂದಿ ಕಲಾವಿದರು ಹಾಗೂ ಕರ್ನಾಟಕ ಬ್ಯಾಂಡ್ 35 ಮಂದಿ ಕಲಾವಿದರನ್ನು ಹೊಂದಿದೆ. ಇಲ್ಲಿಗೆ ಆಯ್ಕೆಯಾಗುವವರು ಸಂಗೀತ ವಿವಿಗಳಲ್ಲಿ ಅರ್ಹತೆ ಪಡೆಯಬೇಕು.Leave a Reply

Your email address will not be published. Required fields are marked *