ಆಶಾ ಮಂದಿರ

ನೊಂದ ಹಿರಿಯ ಜೀವಗಳ ಸಾಂತ್ವನ ಕೇಂದ್ರವೇ ಆಶಾಮಂದಿರ. ಬಾಳಿನಲ್ಲಿ ಭರವಸೆಯನ್ನು ಕಳೆದುಕೊಂಡು ಕತ್ತಲಾವರಿಸಿದ ಮನಸ್ಸಿಗೆ ಉಚಿತವಾಗಿ ಆಶಾಕಿರಣವು ಪ್ರಜ್ವಲಿಸುವಂತೆ ಮಾಡಲು ನಮ್ಮ ಕನಸು ಬಳಗ ಸಜ್ಜಾಗಿ ನಿಂತಿದೆ. ಹೆತ್ತ ಮಕ್ಕಳಿಂದ ಹಾಗೂ ತನ್ನವರಿಂದಲೇ ತಿರಸ್ಕೃತರಾದ ನೊಂದ ಜೀವಗಳಿಗೆ, ಭರವಸೆಯ ಬೆಳಕು ಆಶಾಮಂದಿರ.

ಅವರಿಗಾಗಿ ಬೆಳಿಗ್ಗೆ ಲಘು ವ್ಯಾಯಾಮ, ಕುಡಿಯಲು ಮತ್ತು ಸ್ನಾನಕ್ಕೆ ಬಿಸಿ ನೀರು, ತಮ್ಮಿಷ್ಟ ಧರ್ಮದ ದೇವರ ಪೂಜೆಗೆ ಅವಕಾಶ, ಲಘು ಉಪಾಹಾರ, ವಾಯು ವಿಹಾರದೊಡನೆ ಹಿರಿಯ ನುರಿತ ವೈದ್ಯರಿಂದ ಆರೈಕೆ ಮತ್ತು ಸಾಂತ್ವಾನ ಹಾಗೂ ನೊಂದ ಹಿರಿಯ ಜೀವಗಳು ಲವಲವಿಕೆಯಿಂದ ಇರಲು ಅವರಿಚ್ಛೆಯಂತೆ ಸಮಯ ಕಳೆಯಲು ಅನುವು ಮಾಡಿಕೊಡುವುದು ಸೇರಿದಂತೆ ಎಲ್ಲವನ್ನು ಉಚಿತವಾಗಿ ನಮ್ಮ ಕನಸು ಬಳಗದಿಂದ ಮಾಡಲಾಗುವುದು.  

ನಿಮ್ಮೆಲ್ಲರ ಹಾರೈಕೆಯಿಂದ ಆಶಾಮಂದಿರದಲ್ಲಿ ಬರುವಂತಹ ಹಿರಿಯ ಜೀವಗಳಿಗೆ ಹಾರೈಸುತ್ತಾ ಅವರನ್ನು ಆದಷ್ಟು ಸಂತೋಷವಾಗಿಡಲು, ಹಿರಿಯ ಜೀವಗಳು ತಮ್ಮ ನೋವುಗಳನ್ನು ಮರೆತು, ಸಂತೋಷದಲ್ಲಿ ತಮ್ಮ ಕೊನೆಯ ಜೀವಿತಾವಧಿಯನ್ನು ಕಳೆಯಲು ನಮ್ಮ ಕೈಲಾದಷ್ಟು ಸೇವೆಯನ್ನು ಸಲ್ಲಿಸಲು ಕನಸು ಬಳಗ, ಆಶಾಮಂದಿರದ ಹೆಸರಿನಲ್ಲಿ, ಹೊಸ ಕನಸುಗಳನ್ನು ಹೊತ್ತು ಮಾಗಿದ ಮನಸ್ಸುಗಳಿಗೆ ನೆಮ್ಮದಿಯ ತಾಣವಾಗಲು ಸಜ್ಜಾಗುತ್ತಿದೆ.