ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ
ಪ್ರಜಾಪ್ರಭುತ್ವದ ನಾಡಿನಲ್ಲಿ ಹಕ್ಕುಗಳಿಂದ ವಂಚಿತರಾದವರ ಸಂಖ್ಯೆ ಕಡಿಮೆಯೇನಿಲ್ಲ. ಜನಸಾಮಾನ್ಯರು ಹಾಗೂ ಅವಿದ್ಯಾವಂತ ಅಮಾಯಕರು ನ್ಯಾಯ ವಂಚಿತರಾಗಿ ತಮಗೆ ಸಲ್ಲಬೇಕಾದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ಒಬ್ಬ ಪ್ರಜೆಗೆ ಸಲ ಬೇಕಾದಂತಹ ಕನಿಷ್ಠ ಹಕ್ಕುಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಕನಸು ತಂಡದಿಂದ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಉಗಮವಾಯಿತು.
ದೌರ್ಜನ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಮಾನವ ಹಕ್ಕುಗಳ ಪಾಲನೆ ಅನಿವಾರ್ಯವಾದ್ದರಿಂದ ಮಾನವ ಹಕ್ಕುಗಳ ಮಹತ್ವವನ್ನು ಮತ್ತು ತಮ್ಮ ಹಕ್ಕುಗಳ ಬಳಕೆಯನ್ನು ಸಮಾಜದ ಜನರು ಅರಿತುಕೊಳ್ಳಬೇಕಾಗಿದೆ. ಅಲ್ಲದೆ ಎಲ್ಲಾ ಬಗೆಯ ವರ್ಣ, ಧರ್ಮ, ಲಿಂಗ, ಭಾಷೆ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ನಡೆಯುವ ತಾರತಮ್ಯದೊಡನೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದರಲ್ಲೂ ಮಾನವ ಹಕ್ಕುಗಳ ಸಂರಕ್ಷಣೆಯ ಪಾತ್ರ ಬಲಾಡ್ಯವಾದದ್ದು.
ಮಾನವರು ತಮ್ಮ ಹಕ್ಕಿನ ಅರಿವಿನ ಕೊರತೆಯಿಂದ ಹಲವಾರು ಕಾನೂನುಗಳು ಉಲ್ಲಂಘನೆಯಾಗುತ್ತಿದೆ. ಆದ್ದರಿಂದ ಪ್ರತಿ ವರ್ಷ ಡಿಸೆಂಬರ್ 10ರಂದು ವಿಶ್ವದಲ್ಲೆಡೆ ವಿಶ್ವ ಮಾನವ ಹಕ್ಕು ದಿನವಾಗಿ ಆಚರಿಸಲಾಗುತ್ತದೆ. ಸಾರ್ವಜನಿಕರು ಸಮಾಜದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಉತ್ತಮ ಜೀವನವನ್ನು ನಡೆಸಲು ಮೂಲಭೂತ ಹಕ್ಕುಗಳ ಅವಶ್ಯಕತೆ ಇರುವುದರಿಂದ, ಮಾನವ ಹಕ್ಕುಗಳ ಅರಿವು ಮತ್ತು ಜಾಗೃತಿ ಮೂಡಿಸಲು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲಂಘನೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ನಮ್ಮ ಸಂಸ್ಥೆಯ ಸದಸ್ಯತ್ವ ಹೊಂದುವವರು ಕನಿಷ್ಠ 18 ವರ್ಷದವರಾಗಿರಬೇಕು. ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ಸದಸ್ಯತ್ವವನ್ನು ನೀಡಲಾಗುವುದು.