ಐಎಸ್ ಬೇಹುಗಾರಿಕೆ ; ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ
ಬೆಂಗಳೂರು: ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್(ಐಎಸ್‌ಐ)ಗೆ ಪ್ರಮುಖ ಸ್ಥಳಗಳ ಫೋಟೋಗಳು ಮತ್ತು ವಿವರಗಳನ್ನು ಹಂಚಿಕೊಳ್ಳುತ್ತಿದ್ದ ರಾಜಸ್ಥಾನ ಮೂಲದ ಗೂಢಚಾರನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಮಾಂಡ್ ಮಿಲಿಟರಿ ಇಂಟೆಲಿಜೆನ್ಸ್, ಬೆಂಗಳೂರು ಮತ್ತು ಕೇಂದ್ರೀಯ ಅಪರಾಧ ವಿಭಾಗದ ಜಂಟಿ ಕಾರ್ಯಾಚರಣೆ ನಡೆಸಿ ನಗರದ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಜತೇಂದರ್ ಸಿಂಗ್ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ರಾಜಸ್ಥಾನದ ಬಾರ್ಮರ್ ನಿಂದ ಬಂದಿದ್ದ ಶಂಕಿತನು ಬೆಂಗಳೂರಿನಲ್ಲಿ ಬಟ್ಟೆ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದನು. ಇದರ ಜೊತೆಗೆ ಆತ ತನ್ನ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ(ಐಎಸ್‌ಐ) ಸಂಪರ್ಕ ಹೊಂದಿದ್ದನು. ವಾಟ್ಸ್ ಆಪ್ ವಿಡಿಯೋ ಕರೆ ಮಾಡುವ ಮೂಲಕ ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋಗಳನ್ನು ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ.
ಬಂಧನದ ವೇಳೆ ಆತನ ಬಳಿ ಸೇನಾ ಸಮವಸ್ತ್ರ ಸಿಕ್ಕಿದೆ. ಈ ಕಾರ್ಯಗಳನ್ನು ನಿರ್ವಹಿಸಲು ಆತ ಸೇನಾ ಅಧಿಕಾರಿಯಂತೆ ವೇಷ ಹಾಕುತ್ತಿದ್ದನು. ಇನ್ನು ಬಾರ್ಮರ್ ಮಿಲಿಟರಿ ನಿಲ್ದಾಣದ ಫೋಟೋಗಳನ್ನು ಒದಗಿಸಿದ್ದನು. ಆ ಪ್ರದೇಶದ ಮಿಲಿಟರಿ ವಾಹನಗಳ ಚಲನೆಯನ್ನು ತನ್ನ ನಿರ್ವಾಹಕರಿಗೆ ವರದಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.