ಶಿವಮೊಗ್ಗ; ಸೆಪ್ಟೆಂಬರ್ 28 ರಂದು ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರೊಂದು ಪತ್ತೆಯಾಗಿತ್ತು. ಆ ಕಾರಿನಲ್ಲಿ ಒಂದು ಅಸ್ಥಿ ಪಂಜರವೂ ಪತ್ತೆಯಾಗಿತ್ತು. ತನಿಖೆಯ ಆರಂಭ ಹಂತದಲ್ಲಿ ಅಪಘಾತದಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ಸಿಲುಕಿದ್ದ ಚಾಲಕನೂ ಮೃತಪಟ್ಟದ್ದಾನೆ ಎನ್ನಲಾಗಿತ್ತು. ಆದರೆ, ತನಿಖೆಯ ನಂತರ ಇದೊಂದು ಕೊಲೆ ಪ್ರಕರಣ ಎಂಬುದು ಸಾಬೀತಾಗಿದೆ. ಅಲ್ಲದೆ, ಮೃತಪಟ್ಟ ವ್ಯಕ್ತಿಯನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ಮುಸ್ಲಿಂಪೇಟೆಯ ನಿವಾಸಿ ವಿನೋದ್ (45) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಅಚ್ಚರಿಯ ವಿಚಾರವೆಂದರೆ ವಿನೋದ್ ಕೊಲೆಯಲ್ಲಿ ಸ್ವಂತ ಹೆಂಡತಿ ಮತ್ತು ಮಕ್ಕಳೇ ಭಾಗಿಯಾಗಿದ್ದಾರೆ ಎಂಬ ವಿಚಾರ ತನಿಖೆಯಿಂದ ಹೊರಬಿದ್ದಿದ್ದು, ಪ್ರಕರಣ ಸಂಬಂಧ ಐದು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ವಿನೋದ್ ಎಂಬವರನ್ನು ಕೊಲೆ ಮಾಡಿದ್ದು, ಆತನ ದೇಹವನ್ನು ಕಾರಿನಲ್ಲಿ ತಂದು ಕಾಡಿನ ಪ್ರದೇಶದಲ್ಲಿ ನಿಲ್ಲಿಸಿ ಬೆಂಕಿ ಹಚ್ಚಿ ಅಪಘಾತ ದೃಶ್ಯದಂತೆ ಸೆಟ್ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕೌಟುಂಬಿಕ ಕಲಹ, ತನ್ನವರಿಂದಲೇ ಹತ್ಯೆ;
ಸುಟ್ಟ ಕಾರು, ಅಸ್ಥಿ ಪಂಜರ ಪತ್ತೆಯಾಗಿರುವ ಸಂಬಂಧ ಜೇಡಿಕುಣಿ ಗ್ರಾಮ ಪಂಚಾಯಿತಿ ಸದಸ್ಯರು ದೂರು ನೀಡಿದ್ದರು. ತನಿಖೆ ನಡೆಸಿದ ತೀರ್ಥಹಳ್ಳಿ ಪೊಲೀಸರಿಗೆ ಮೃತ ವಿನೋದ್ನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಹೆಂಡತಿಯ ಅಕ್ಕನ ಮಗ ಮತ್ತು ಮೃತನ ತಮ್ಮನನ್ನು ವಿಚಾರಣೆ ನಡೆಸಿದ ನಂತರ ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎಂಬುದು ತಿಳಿದುಬಂದಿದೆ.ಸೆಪ್ಟೆಂಬರ್ 25ರಂದು ಐವರು ಆರೋಪಿಗಳು ವಿನೋದ್ ಕೊಲೆಗೆ ಸಂಚು ರೂಪಿಸಿದ್ದಾರೆ. ಸೆಪ್ಟೆಂಬರ್ 26ರಂದು ಬೆಳಗ್ಗೆ ಆನಂದಪುರದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿಟ್ಟುಕೊಂಡಿದ್ದರು. ಸೆಪ್ಟೆಂಬರ್ 26ರಂದು ರಾತ್ರಿ 8.30ರ ಹೊತ್ತಿಗೆ ಮನೆಯಲ್ಲೇ ತಂತಿ ಬಿಗಿಯುವ ರಾಡ್, ಸುತ್ತಿಗೆ, ಕಬ್ಬಿಣದ ಪೈಪ್ ರಾಡ್ನಿಂದ ಹೊಡೆದು ವಿನೋದ್ ಕೊಲೆ ಮಾಡಲಾಗಿದೆ. ವಿನೋದ್ ಬಳಸುತ್ತಿದ್ದ ಕಾರಿನಲ್ಲೇ ಮೃತದೇಹವನ್ನು ಸಾಗಿಸಲಾಗಿದೆ. ತೀರ್ಥಹಳ್ಳಿ ವಿಶೇಷ; ಸಿಎಂ, ಸ್ಪೀಕರ್ ಎಲ್ಲಾ ಹುದ್ದೆ ಸಿಕ್ಕಿದೆ ಕ್ಷೇತ್ರದ ಶಾಸಕರಿಗೆ ತನಿಖೆ ವೇಳೆ ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು ಆರೋಪಿಗಳು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿದ್ದರು. ಮನೆಯಲ್ಲೇ ಮೊಬೈಲ್ಗಳನ್ನು ಇಟ್ಟು ಹೋಗಿದ್ದರು. ಕಾರಿನಲ್ಲಿ ಯಡೇಹಳ್ಳಿ, ರಿಪ್ಪನ್ ಪೇಟೆ, ಹುಂಚದಕಟ್ಟೆ, ಶಂಕ್ರಳ್ಳಿ, ಮಲ್ಲೇಸರ ಮಾರ್ಗವಾಗಿ ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಗ್ರಾಮದ ಹುಣಸೆಕೊಪ್ಪ ಅರಣ್ಯ ಪ್ರದೇಶಕ್ಕೆ ಮೃತದೇಹ ತಂದಿದ್ದಾರೆ. ಚಾಲಕನ ಸೀಟಿನಲ್ಲಿ ಮೃತದೇವನ್ನು ಇರಿಸಿದ್ದಾರೆ. ಮೊದಲೆ ಖರೀದಿಸಿಟ್ಟಿದ್ದ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಕಾರಿನ ನಂಬರ್ ಪ್ಲೇಟ್ ಮತ್ತು ವಿನೋದ್ ಬಳಸುತ್ತಿದ್ದ ಮೊಬೈಲ್ ಫೋನನ್ನು ದಾರಿ ಮಧ್ಯೆ ಎಸೆದು ಆರೋಪಿಗಳು ಮನೆಗೆ ಮರಳಿದ್ದರು. ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು ಕೊಲೆ ಮಾಡಿದ್ದ ಜಾಗವನ್ನು ಫಿನಾಯಲ್ ಬಳಸಿ ಸ್ವಚ್ಛಗೊಳಿಸಿದ್ದರು. ಕೃತ್ಯದ ವೇಳೆ ಆರೋಪಿಗಳು ಬಳಸಿದ್ದ ಬಟ್ಟೆ, ಚಪ್ಪಲಿಗಳನ್ನು ಮನೆಯ ಹಿಂಭಾಗದಲ್ಲಿ ಸುಟ್ಟು ಹಾಕಿದ್ದರು. ತನಿಖೆ ವೇಳೆ ಮನೆಯವರ ಮೇಲೆಯೇ ಅನುಮಾನಗೊಂಡ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದರು. ಈ ವೇಳೆ ವಿನೋದ್ ಕೊಲೆಯ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆ.ಪೊಲೀಸರು ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸುಟ್ಟ ಕಾರು, ಮೃತದೇಹ ಪತ್ತೆಯಾದಾಗ ಮೊದಲು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಶಂಕಿಸಲಾಗಿತ್ತು. ಕಾರಿನಲ್ಲಿದ್ದ ವ್ಯಕ್ತಿಯ ಗುರುತು ಪತ್ತೆಯಾದರೆ ಮುಂದಿನ ಮಾಹಿತಿ ತಿಳಿಯಲಿದೆ ಎಂಬುದು ತಿಳಿದಿತ್ತು. ಈಗ ಪ್ರರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಜನರು ಮೊದಲು ಬೆಂಕಿಗಾಹುತಿಯಾದ ಕಾರು ಮತ್ತು ಸುಟ್ಟ ಶರೀರಿ ನೋಡಿದ್ದರು. ಪೊಲೀಸರಿಗೆ ವಿಚಾರ ತಿಳಿಸಿದ್ದರು.