ನಿಮ್ಮ ಮನೆಯಲ್ಲಿ ಐದು ಎಣ್ಣೆಗಳ ಮಿಶ್ರಣ ಮಾಡಿದ ದೀಪ ಹಚ್ಚದಿದ್ದರೆ ಕೇಡು ಸಂಭವಿಸುತ್ತದೆ, ಮಕ್ಕಳಿಗೆ ಕಣ್ಣಿಗೆ ಕಪ್ಪು ಬಣ್ಣ ಮೆತ್ತದಿದ್ದರೆ ಅವರ ಆರೋಗ್ಯ ಕ್ಷೀಣಿಸುತ್ತದೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಕೆಲವೊಮ್ಮೆ ಹಬ್ಬುತ್ತಾ ನಮ್ಮ ಕುಟುಂಬಕ್ಕೂ ಬಡಿದಿರುತ್ತವೆ.
ಆಗ ನಾವು ಕೂಡ ಯಾವುದೇ ವೈಜ್ಞಾನಿಕ ಆಧಾರಗಳಿಗೆ ತಲೆಕೆಡಿಸಿಕೊಳ್ಳದೆಯೇ ಅಂಧಶ್ರದ್ಧೆಯ ಮೂಲಕ ವದಂತಿಯನ್ನು ಆಚರಣೆ ಮಾಡಿರುತ್ತೇವೆ. ಯಾಕೆಂದರೆ, ಯಾರಿಗೂ ಕೇಡು ಸಂಭವಿಸುವುದು ಬೇಡವಾಗಿರುತ್ತದೆ. ಇದೇ ರೀತಿಯ ಬಾಯಿಂದ ಬಾಯಿಗೆ ಹಬ್ಬಿದ ಮಾತೊಂದು ಬಿಹಾರದಲ್ಲಿ ‘ಪಾರ್ಲೆ-ಜಿ ಬಿಸ್ಕೆಟ್ ‘ ಮಾರಾಟ ಹೆಚ್ಚಿಸಿದೆ!
ಹೌದು, ಬಿಹಾರದಲ್ಲಿ ಸಂತಾನ ಪ್ರಾಪ್ತಿ ಮತ್ತು ಮಕ್ಕಳ ಶ್ರೇಯಸ್ಸಿಗಾಗಿ ‘ಜಿತಿಯಾ’ ಹಬ್ಬವನ್ನು ಆಚರಿಸುವ ವಾಡಿಕೆ ಇದೆ. ಈ ವೇಳೆ ಹೆಂಗಸರು ಹಾಗೂ ತಾಯಂದಿರು 24 ಗಂಟೆಗಳ ಉಪವಾಸ ವ್ರತ ಕೈಗೊಳ್ಳುತ್ತಾರೆ. ಅದೇ ರೀತಿ ಈ ವರ್ಷ ಹಬ್ಬದ ಸಂಭ್ರಮದಲ್ಲಿರುವ ಹೆಂಗಸರಿಗೆ ಮತ್ತು ತಾಯಂದಿರಿಗೆ ಅಕ್ಕಪಕ್ಕದವರು ಎಚ್ಚರಿಕೆಯೊಂದನ್ನು ಕಿವಿಗೆ ಊದಿದ್ದಾರೆ.
ಅದೇನೆಂದರೆ, 24 ಗಂಟೆಯೊಳಗೆ ಮಕ್ಕಳಿಗೆ, ಅದರಲ್ಲೂ ಗಂಡುಮಕ್ಕಳಿಗೆ ವಿಶೇಷವಾಗಿ ಪಾರ್ಲೆ-ಜಿ ಬಿಸ್ಕೆಟ್ ತಿನ್ನಿಸಬೇಕು. ಒಂದು ವೇಳೆ ಮಕ್ಕಳು ತಿನ್ನಲು ನಿರಾಕರಿಸಿದರೆ, ಹಠ ಮಾಡಿದರೆ ಭವಿಷ್ಯದಲ್ಲಿ ಕೇಡು ಸಂಭವಿಸುತ್ತದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಆತಂಕದಲ್ಲಿ ಹೆಣ್ಣುಮಕ್ಕಳು ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕೊಳ್ಳುತ್ತಿದ್ದಾರೆ. ಉದ್ದನೆಯ ‘ಕ್ಯೂ’ ಕಾಣುವುದು ಸಾಮಾನ್ಯವಾಗಿದೆ.
.ಈ ಬಗ್ಗೆ ಸೀತಾಮಾರ್ಹಿ ಜಿಲ್ಲೆಯಲ್ಲಿ ವದಂತಿ ಜೋರಾಗಿದ್ದು, ಪಾರ್ಲೆ-ಜಿ ಬಿಸ್ಕೆಟ್ ‘ಬ್ಲ್ಯಾಕ್ ಮಾರ್ಕೆಟ್’ ಸೃಷ್ಟಿಯಾಗಿದೆಯಂತೆ. ಬರ್ಗಾನಿಯಾ, ದ್ಹೇಹ್ , ನಾನಾಪುರ, ಬಾಜಪಟ್ಟಿ, ಮೇಜರ್‌ಗಂಜ್‌ನಲ್ಲಿ ಜನರಿಗೆ ಸರ್ಕಾರಿ ಅಧಿಕಾರಿಗಳು, ವೈದ್ಯರು ತಿಳಿಹೇಳಲು ಯತ್ನಿಸುತ್ತಿದ್ದಾರೆ. ಆದರೆ ಜನರು ಕಿವಿಗೆ ಹಾಕಿಕೊಳ್ಳದೆಯೇ ವದಂತಿಯನ್ನೇ ಬಲವಾಗಿ ನಂಬಿಕೊಂಡು ಕೂತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರ್ ಕಿಶೋರ್ ರಾಯ್ ಆತಂಕ ವ್ಯಕ್ತಪಡಿಸಿದ್ದಾರೆ.