ಕಳೆದ ಕೆಲ ಸಮಯದಿಂದ ದೇಶದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿದೆ. ಈಗಾಗಲೇ ಪೆಟ್ರೋಲ್ ಶತಕದ ಗಡಿ ದಾಟಿದ್ದು, ಡೀಸೆಲ್ ಬೆಲೆ ಶತಕದ ಅಂಚಿನಲ್ಲಿದೆ. ಇದರ ಪರಿಣಾಮ ವಾಹನ ಸವಾರರು ಅಂತೂ ಅತ್ತ ಉಗಿಯಲೂ ಆಗದೆ ಇತ್ತ ನುಂಗಲೂ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಪರಿಷ್ಕರಣೆಗೊಂಡ ಬಳಿಕ ಇಂದು ಪೆಟ್ರೋಲ್, ಡೀಸೆಲ್ ದರದ ವಿವರ ಇಲ್ಲಿ ಕೊಡಲಾಗಿದೆ.
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ದರ ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವಾಗಲೇ ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿದೆ. ದಿನ ನಿತ್ಯ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಿದ್ದು, ಇಂದು ಕೂಡ ಈ ದರದಲ್ಲಿ ಏರಿಕೆ ಆಗಿದೆ. ಅಕ್ಟೋಬರ್ ತಿಂಗಳ ಎರಡನೇ ದಿನವಾದ ಇಂದು (ಶನಿವಾರ) ಕೂಡ ತೈಲ ದರ ಏರಿಕೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 25 ಪೈಸೆ ಏರಿದರೆ, ಪ್ರತೀ ಒಂದು ಲೀಟರ್ ಡೀಸೆಲ್ ದರದಲ್ಲಿ 32 ಪೈಸೆ ಏರಿಕೆ ಕಂಡಿದೆ.
ಇಂದು ಕೂಡ ಏರಿಕೆಯಾಗುವ ಮೂಲಕ ಕಳೆದ ಅನೇಕ ಸಮಯದಿಂದ ಪ್ರತಿ ನಿತ್ಯ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡಂತೆ ಆಗಿದೆ. ಇನ್ನು ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನದ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ