ಲಸಿಕಾ ಅಭಿಯಾನದಲ್ಲಿ ಭಾರತ ಅಮೋಘ ಸಾಧನೆ : ಪ್ರಧಾನಿ ಬಣ್ಣನೆ

ಬೆಂಗಳೂರು,ಅ.2- ಮುಂದುವರೆದ ರಾಷ್ಟ್ರಗಳಿಗಿಂತಲೂ ಲಸಿಕಾ ಅಭಿಯಾನದಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಓಪನ್ ನಿಯತಕಾಲಿಕ ಪತ್ರಿಕೆಗೆ ಸಂದರ್ಶನ ನೀಡಿರುವ ಮೋದಿ ಅವರು, ಲಸಿಕೆ ರೂಪಿಸದೆ ಇದ್ದರೆ ದೇಶದ ಪರಿಸ್ಥಿತಿ ಹೇಗಿರುತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. ವಿಶ್ವದ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಈಗಲೂ ಲಸಿಕೆ ಲಭ್ಯವಿಲ್ಲ. ಆದರೆ ನಾವು ಆತ್ಮ ನಿರ್ಭರ್ ಭಾರತದಡಿ ಸ್ವಂತ ಲಸಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ವಯಸ್ಕ ಜನಸಂಖ್ಯೆ ಪೈಕಿ ಶೇ.69ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದು, ಶೇ.25ರಷ್ಟು ಮಂದಿ 2ನೇ ಡೋಸ್ ಪಡೆದಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

2020ರ ಮೇ ತಿಂಗಳಿನಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಿದೆವು. ಹಳೆಯ ಮಾದರಿಯಲ್ಲಿ ದಶಕಗಳ ಕಾಲ ಲಸಿಕೆ ಹಾಕಬಾರದೆಂದು ಮೊದಲೇ ನಿರ್ಧರಿಸಿದ್ದೆವು. ಹಾಗಾಗಿ ವೇಗವಾಗಿ, ಪರಿಣಾಮಕಾರಿಯಾಗಿ ಮತ್ತು ವಿವೇಚನೆಯಿಂದ ಅಭಿಯಾನ ನಡೆಸಲಾಗಿದೆ ಎಂದರು.

ಹಳ್ಳಿಯಲ್ಲಿ ಮೊದಲನೇ ಡೋಸ್ ಲಸಿಕೆ ಪಡೆದ ವಲಸೆ ಕಾರ್ಮಿಕ 2ನೇ ಡೋಸ್ನ್ನು ತಾನು ಕೆಲಸ ಮಾಡುವ ಜಾಗದಲ್ಲಿ ಪಡೆಯಲು ಅವಕಾಶವಿದೆ ಎಂದು ಹೇಳಿದರು. ದೇಶದಲ್ಲಿ ಅರ್ಹರು ಸೇವೆ ಪಡೆಯಲು ಕಾಯಬೇಕಾದ ಪರಿಸ್ಥಿತಿ ಈಗಿಲ್ಲ. ಲಂಚ ನೀಡುವ ಅಗತ್ಯವೂ ಇಲ್ಲ. ಪ್ರಪಂಚದಲ್ಲಿ ಭಾರತದ ಪರಿಸ್ಥಿತಿಯನ್ನು ಹೋಲಿಸಿದರೆ ಅಭಿವೃದ್ದಿ ಹೊಂದಿದ ದೇಶಗಳಿಂತಲೂ ನಾವು ಮುಂದೆ ಇದ್ದೇವೆ. ಆದರೆ ಕೆಲವರು ನಮ್ಮ ದೇಶದ ಹೆಸರು ಹಾಳು ಮಾಡುವ ಸಲುವಾಗಿಯೇ ಮಾತನಾಡುತ್ತಿದ್ದಾರೆ.

ಯಾವುದೇ ಅಧ್ಯಯನಶೀಲತೆ ಇಲ್ಲದೆ ರಾಜಕೀಯಕ್ಕಾಗಿ ಟೀಕೆ ಮಾಡುತ್ತಾರೆ. ನಮಗೆ ಟೀಕಾಕಾರರಿಗಿಂತಲೂ ವಿಮರ್ಶಕಾರರ ಅಗತ್ಯವಿದೆ. ದುರದೃಷ್ಠವಶಾತ್ ಉತ್ತಮ ವಿಮರ್ಶಕರು ಲಭ್ಯವಿಲ್ಲ ಎಂದು ಹೇಳಿದರು. ಜಾಗತಿಕವಾಗಿ ಭಾರತ ಹೆಚ್ಚು ಸಾಧನೆಗಳನ್ನು ಮಾಡುತ್ತಿದೆ. ಉತ್ತಮ ಸ್ನೇಹಿತರನ್ನು ಹೊಂದಿದೆ.

ಕೊರೊನಾ ಬಳಿಕ ಆರೋಗ್ಯ ಕ್ಷೇತ್ರದತ್ತ ಗಮನ ಕೇಂದ್ರಿಕರಿಸಲಾಗಿದೆ. 2014ರಲ್ಲಿ ಏಮ್ಸ್ ಒಂದು ಮಾತ್ರ ಇತ್ತು. ಈಗ 22 ಸಂಸ್ಥಗಳಾಗಿವೆ. 380 ವೈದ್ಯಕೀಯ ಕಾಲೇಜುಗಳ ಸಂಖ್ಯೆ 560ಕ್ಕೆ ಏರಿಕೆಯಾಗಿದೆ. ಪಿಪಿಇ ಕಿಟ್, ವೆಂಟಿಲೇಟರ್ಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಸಿದ್ದೇವೆ ಎಂದು ಅವರು ವಿಶ್ಲೇಷಿಸಿದರು.

give feedback
5/5

Leave a Reply

Your email address will not be published. Required fields are marked *